ಚಿಕ್ಕಬಳ್ಳಾಪುರ: ವಿಧಾನ ಸಭಾ ಕ್ಷೇತ್ರದಲ್ಲಿ ಫಾರಂ 53 ರಲ್ಲಿ 2792 ಅರ್ಜಿಗಳು , ಫಾರಂ 57 ರಲ್ಲಿ 13970 ಅರ್ಜಿಗಳು ಬಾಕಿ ಇದ್ದು, ಅರ್ಹ ರೈತರ ಅರ್ಜಿಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ತಾಲೂಕು ಕಚೇರಿಯಲ್ಲಿ ನಡೆದ ಬಗರ್ ಹುಕುಂ ಸಾಗುವಳಿ ಚೀಟಿ ದರಖಾಸ್ತ್ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಸಕ್ರಮದಲ್ಲಿ ವ್ಯವಸಾಯಕ್ಕೆ ಎಂದು ಸಾಗುವಳಿ ಮಾಡುತ್ತಿರುವ ಸುಮಾರು 16 ಸಾವಿರಕ್ಕು ಹೆಚ್ಚು ರೈತರು ಫಾರಂ ನಂ 50 ಹಾಗೂ 53 ಹಾಗೂ 57 ರಲ್ಲಿ ಅರ್ಜಿ ಹಾಕಿಕೊಂಡಿದ್ದು, ಆದಷ್ಟು ಬೇಗ ಅರ್ಹ ರೈತರ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.
50 ಮತ್ತು 53 ರಲ್ಲಿ ಅರ್ಜಿ ಹಾಕಿಕೊಂಡಿರುವ ಎಸ್ಸಿ ಎಸ್ಟಿ ಜನರು ಒಂದು ವರ್ಷ ಅನುಭದಲ್ಲಿ ಇರಬೇಕು, ಸಾಮಾನ್ಯ ವರ್ಗ ದವರು ಮೂರು ವರ್ಷ ಅನುಭವದಲ್ಲಿರಬೇಕು. ಅದು ಸರ್ಕಾರಿ ಜಮೀನಿಗೆ ಅನ್ವಯ ಆಗುತ್ತೆ. ಫಾರಂ ನಂಬರ್ 57 ಆದರೆ, ಕೇವಲ ಗೋಮಾಳ ಜಮೀನು ಆಗಿದ್ದರೆ ಮಾತ್ರ ಮಂಜೂರು ಮಾಡಬಹುದಾಗಿದೆ. ಹತ್ತು ವರ್ಷಗಳ ಅವಧಿಯಲ್ಲಿ ಫಾರಂ ನಂಬರ್ 53 ಯಲ್ಲಿ ಚಿಕ್ಕಬಳ್ಳಾಪುರ ಕಸಬಾ ವ್ಯಾಪ್ತಿಯಲ್ಲಿ 634, ನಂದಿ ಹೋಬಳಿಯಲ್ಲಿ 1048, ಮಂಡಿಕಲ್ ಹೋಬಳಿಯಲ್ಲಿ 598 ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 512 ಅರ್ಜಿಗಳು ಸಲ್ಲಿಕೆಯಾಗಿದೆ. ಫಾರಂ ನಂಬರ್ 57 ರಲ್ಲಿ ಕಸಬಾ ದಲ್ಲಿ 2909, ನಂದಿ ಹೋಬಳಿಯಲ್ಲಿ 3786, ಮಂಡಿಕಲ್ ಹೋಬಳಿಯಲ್ಲಿ 4819 ಹಾಗೂ ಮಂಚೇನಹಳ್ಳಿ ಯಲ್ಲಿ 2456 ಅರ್ಜಿಗಳು ಸ್ವೀಕೃತವಾಗಿದೆ. ಕಂದಾಯ ಅಧಿಕಾರಿಗಳ ಪ್ರಕಾರ ಈ ಅಂಕಿಸಂಖ್ಯೆ ದೊರಕಿದ್ದು ಇಂದು ಅರ್ಜಿಗಳನ್ನು ಲೆಕ್ಕ ಪಡೆದಿದ್ದು ಆದಷ್ಟು ಬೇಗ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು
ಈ ವೇಳೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ರಶ್ಮಿ, ಮಂಚೇನಹಳ್ಳಿ ತಹಸೀಲ್ದಾರ್ ಪೂರ್ಣಿಮಾ ಹಾಗೂ ಆರ್ ಐ ಗಳು ವಿ ಎ ಗಳು ಇದ್ದರು.
