ಚಿಕ್ಕಬಳ್ಳಾಪುರ: ಹುಟ್ಟುಹಬ್ಬ ಆಚರಿಸುತ್ತಿದ್ದ ಸ್ವಾಮೀಜಿ ಮೇಲೆ ಸಂಬಂಧಿಕರಿಂದಲೇ ಹಲ್ಲೆ ನಡೆದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಓಂಕಾರ ಜ್ಯೋತಿ ಮಠದ ಬಳಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಓಂಕಾರ ಜ್ಯೋತಿ ಮಠದ ಬಳಿ ಈ ಘಟನೆ ನಡೆದಿದ್ದು ಓಂಕಾರ ಜ್ಯೋತಿ ಮಠದ ಉಮಾಮಹೇಶ್ವರ ಸ್ವಾಮೀಜಿ ಮೇಲೆ ಜಯಮ್ಮ ಎಂಬುವವರ ಕುಟುಂಬಸ್ಥರಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ
ವೃದ್ದೆ ಜಯಮ್ಮ ಅವರಿಗೆ ಯಾಮಾರಿಸಿ ಮಠದ ಜಾಗವನ್ನು ಗಿಫ್ಟ್ ಡೀಡ್ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಸ್ವಾಮೀಜಿಯ ಮೇಲೆ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಜಯಮ್ಮರ ಸಂಬಂಧಿಕರು ಸ್ವಾಮೀಜಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆನ್ನಲಾಗಿದೆ. ಕಳೆದ ಆರು ತಿಂಗಳ ಹಿಂದೆ ಮಠದ ಜಾಗವನ್ನು ಓಂಕಾರ ಜ್ಯೋತಿ ಮಠ ಟ್ರಸ್ಟ್ ಗೆ ಗಿಫ್ಟ್ ಡೀಡ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಮಠವನ್ನು ವರ್ಷಗಳ ಹಿಂದೆ ಮರಿಯಪ್ಪ ಸ್ವಾಮಿ ಎಂಬುವವರು ನಿರ್ಮಿಸಿದ್ದರು. ಟ್ರಸ್ಟ್ ನಲ್ಲಿ ಜಯಮ್ಮರನ್ನು ಗೌರವಾಧ್ಯಕ್ಷೆಯಾಗಿ ನೇಮಿಸಿದ್ದರೂ ಇದೀಗ ಗಿಫ್ಟ್ ಡಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಠಕ್ಕೆ ಆಗಮಿಸಿದ್ದ ಜಯಮ್ಮ ಕುಟುಂಬಸ್ಥರು ಇಲ್ಲಿ ಗಲಾಟೆ ಸೃಷ್ಟಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಹಲ್ಲೆಯಲ್ಲಿ ಗಾಯಗೊಂಡ ಉಮಾಮಹೇಶ್ವರ ಸ್ವಾಮೀಜಿಯನ್ನು ಚಿಕ್ಕಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
