ಶಿಡ್ಲಘಟ್ಟ : ಸುಮಾರು 350 ವರ್ಷಗಳ ಇತಿಹಾಸವಿರುವ, ನಗರದ ಸಾಂಸ್ಕೃತಿಕ ಪರಂಪರೆಯ ಕನ್ನಡಿಯಂತಿರುವ ಶಾಮಣ್ಣಬಾವಿಯನ್ನು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸ್ಥಳೀಯ ಯುವಕರು ಮತ್ತು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಮಿತಿಯವರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದರು ಆದರೆ, ಅಂದು ಮೆಟ್ಟಿಲುಗಳ ಬಾವಿಯಿಂದ ತೆಗೆದು ರಸ್ತೆಯ ಪಕ್ಕದಲ್ಲಿ ಸುರಿದಿದ್ದ ತ್ಯಾಜ್ಯದ ರಾಶಿ ಹಾಗು ಗಿಡಗಂಟೆಗಳು ಮೂರು ತಿಂಗಳು ಕಳೆದರೂ ಹಾಗೆಯೇ ಬಿದ್ದಿದೆ.
ಯುವಕರೆಲ್ಲರು ಸೇರಿ ಕಲ್ಯಾಣಿ ಕಾಯೋ ಕೆಲಸ ಮಾಡಿದ್ದೇವೆ, ಆದರೆ ತೆಗೆದ ಕಸ ಸಾಗಿಸೋ ತಾಳ್ಮೆ ನಗರಸಭೆಗಿಲ್ಲ ನಗರದ ಅಗ್ರಹಾರ ಬೀದಿಯ ನಿವಾಸಿಗಳ ಆಗ್ರಹವಾಗಿದೆ.
ತ್ಯಾಜ್ಯವನ್ನು ತೆರವುಗೊಳಿಸದ ಕಾರಣ, ರಸ್ತೆಯಲ್ಲೇ ಬಿದ್ದಿರುವ ಆ ಮಣ್ಣು ಮತ್ತು ಕಸದ ರಾಶಿಯ ಮೇಲೆ ಈಗ ಮತ್ತೆ ಹೊಸ ಗಿಡಗಳು ಬೆಳೆಯತೊಡಗಿವೆ. ಇದು ರಸ್ತೆ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. “ನಾವು ನಮ್ಮ ಕೈಲಾದ ಕೆಲಸ ಮಾಡಿದ್ದೇವೆ. ನಗರಸಭೆಯವರು ಕನಿಷ್ಠ ಆ ಕಸವನ್ನು ದೂರ ಸಾಗಿಸಬೇಕಿತ್ತು” ಎಂದು ಶ್ರಮದಾನದಲ್ಲಿ ಪಾಲ್ಗೊಂಡಿದ್ದ ಯುವಕರು ಅಳಲು ತೋಡಿಕೊಂಡಿದ್ದಾರೆ.
ಈ ಶಾಮಣ್ಣಬಾವಿ ಕೇವಲ ಬಾವಿಯಲ್ಲ, ಇದು ಆಧ್ಯಾತ್ಮಿಕ ಕೇಂದ್ರವೂ ಹೌದು. ಇಲ್ಲಿ ಒಂದೆಡೆ ಶ್ರೀಕಂಠೇಶ್ವರ (ಶಿವ) ಮತ್ತೊಂದೆಡೆ ಶ್ರೀಲಕ್ಷ್ಮೀನರಸಿಂಹಸ್ವಾಮಿ(ವಿಷ್ಣು) ನೆಲೆಸಿದ್ದಾರೆ, ಹರಿ-ಹರ ದೇವರುಗಳು ಒಂದೇ ಕಡೆ ದರ್ಶನಭಾಗ್ಯ ಕಲ್ಪಿಸುವ ಅಪರೂಪದ ತಾಣವಿದು ಸುತ್ತಲೂ ತೆಂಗಿನಮರ ಅಶ್ವತ್ ಕಟ್ಟೆಯ ಮರಗಳು ಹಾಗು ಹುಣಸೆ ಮರಗಳಿದ್ದು, ಹಿಂದೆ ಇದು ನಗರದ ಯುವಕರಿಗೆ ಈಜು ಕಲಿಯುವ ಪ್ರಮುಖ ತಾಣವಾಗಿತ್ತು.
ಶಾಮಣ್ಣಬಾವಿಯಲ್ಲಿ ನೀರು ನಿಂತರೆ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿಗಳಲ್ಲಿ ನೀರು ಸಿಗುತ್ತದೆ ಇಂತಹ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯುವಕರು ಮುಂದಾಗಿದ್ದರೂ, ಸ್ಥಳೀಯ ಆಡಳಿತದ ಅಸಹಕಾರ ಭಕ್ತರಲ್ಲಿ ಬೇಸರ ತಂದಿದೆ ಆದರೆ ಕನಿಷ್ಠ ಆ ತ್ಯಾಜ್ಯವನ್ನು ನಗರಸಭೆಯವರು ದೂರ ಸಾಗಿಸದಿದ್ದರೆ ಹೇಗೆ ಎಂದು ಶ್ರಮದಾನದಲ್ಲಿ ಪಾಲ್ಗೊಂಡ ಯುವಕರಾದ ಸುಧಾಕರ್, ಸೂರಿ,ಮುರಳಿ ವೆಂಕಟೇಶ್, ಮಂಜುಗೌಡ,ಶ್ರೀಧರ್, ಸೀನಪ್ಪ,ಬಾಬು ಇನ್ನೂ ಹಲವು ಯುವಕರು ಆಗ್ರಹಿಸಿದ್ದಾರೆ.
ಬಾಕ್ಸ್ :-
ಶಾಮಣ್ಣ ಬಾವಿಯ ಪಕ್ಕದ ರಸ್ತೆಯಲ್ಲಿನ ತ್ಯಾಜ್ಯದ ಬಗ್ಗೆ ತಿಳಿದಿರಲಿಲ್ಲ ಒಂದು ವಾರದೊಳಗೆ ಈ ತ್ಯಾಜ್ಯವನ್ನು ಹೊರಸಾಗಿಸಲು ಸಂಬಂಧಪಟ್ಟವರಿಗೆ ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
–ಜಿ. ಅಮೃತಾ, ನಗರಸಭೆ ಪೌರಾಯುಕ್ತ
