ಶಿಡ್ಲಘಟ್ಟ : ತಾಲ್ಲೂಕಿನ ಶಿಡ್ಲಘಟ್ಟ-ಚೀಮಂಗಲ ಮುಖ್ಯ ರಸ್ತೆಯಿಂದ ನಾರಾಯಣದಾಸರ ಹಳ್ಳಿಗೆ 70 ಲಕ್ಷ ರೂ.ಗಳ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ, ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಬಿ.ಎನ್. ರವಿಕುಮಾರ್ ವೀಕ್ಷಿಸಿದರು.
ವೀಕ್ಷಿಸಿದ ನಂತರ ಗ್ರಾಮಸ್ಥರೊಂದಿಗೆ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್ ಅವರು, ಶಿಡ್ಲಘಟ್ಟ-ಚೀಮಂಗಲ ಮುಖ್ಯ ರಸ್ತೆಯಿಂದ ನಾರಾಯಣ ದಾಸರಹಳ್ಳಿವರೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬಹು ದಿನಗಳ ಹಿಂದೆ ಡಾಂಬರು ಹಾಕಿದ್ದು, ರಸ್ತೆ ಹಾಳಾಗಿ ಸಂಚಾರಕ್ಕೆ ತೊಡಕಾಗಿತ್ತು ಹಾಗಾಗಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಪಡಿಸಿ ಡಾಂಬರೀಕರಣಕ್ಕೆ ಮನವಿ ಮಾಡಿದ್ದರು. ಗ್ರಾಮಸ್ಥರ ಬಹಳ ವರ್ಷಗಳ ಬೇಡಿಕೆಯಾಗಿದ್ದ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಡಾಂಬರು ರಸ್ತೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು.
ಕಾಮಗಾರಿಯನ್ನು ನಿಮ್ಮ, ನಮ್ಮ ತೆರಿಗೆ ಹಣದಿಂದ ಮಾಡಲಾಗುತ್ತಿದೆ ಕಾಮಗಾರಿಯ ಗುಣಮಟ್ಟ ಗಮನಿಸಬೇಕು, ಗುಣಮಟ್ಟದಲ್ಲಿ ರಾಜಿಯಾಗಬೇಡಿ ಗುಣಮಟ್ಟದಲ್ಲಿ ವ್ಯತ್ಯಾಸವಿದ್ದರೆ ನನಗೆ ಅಥವಾ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ರಸ್ತೆ ಅಭಿವೃದ್ಧಿ ವಿಸ್ತರಣೆ ಮತ್ತು ಡಾಂಬರೀಕರಣಕ್ಕಾಗಿ 70 ಲಕ್ಷ ರೂ.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದು, ಕಾಮಗಾರಿ ನಡೆಯುತ್ತಿದೆ, ಕಾಮಗಾರಿಯ ಗುಣಮಟ್ಟ ಕಾಪಾಡಿ ಕೊಂಡು ನಿಗದಿತ ಸಮಯದೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಇದೇ ವೇಳೆ ಗ್ರಾಮಸ್ಥರೊಂದಿಗೆ ಗ್ರಾಮದ ಅಭಿವೃದ್ಧಿ, ಕೈಗೊಳ್ಳಬೇಕಾದ ಮೂಲಸೌಕರ್ಯಗಳು ಮತ್ತು ಕೈಗೊಂಡ ಕಾಮಗಾರಿಗಳ ಬಗ್ಗೆ ಚರ್ಚಿಸಿದರು ,ಮುಖಂಡ ತಾದೂರು ರಘು, ಗ್ರಾಮಸ್ಥರು ಹಾಜರಿದ್ದರು.
