ಶಿಡ್ಲಘಟ್ಟ : ಚಿಮುಲ್ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಇಬ್ಬರು ನಿರ್ದೇಶಕರು ಗೆಲ್ಲುವುದು ಗ್ಯಾರಂಟಿ ಎಂದು ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಚಿಮುಲ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಶಿಡ್ಲಘಟ್ಟ ವಿದಾನಸಭಾ ಕ್ಷೆತ್ರವು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು ಸಾಕಷ್ಟು ಚುನಾವಣೆಗಳಲ್ಲಿ ಈ ಕ್ಷೇತ್ರದ ಮತದಾರರು ಅದನ್ನು ಸಾಭೀತು ಮಾಡಿ ತೋರಿಸಿದ್ದು, ನಾವು ಮೈ ಮರೆತು ಕೂರುವಂತಿಲ್ಲ ನಮ್ಮ ಎದುರಾಳಿ ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಪಕ್ಷವನ್ನು ಸಮರ್ಥವಾಗಿ ಎದುರಿಸಬೇಕಾಗಿರುವುದರಿಂದ ಎಲ್ಲಾರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿದ ಡೇರಿಗಳು ಹೆಚ್ಚಾಗಿದ್ದು ಕಾಂಗ್ರೆಸ್‍ನಲ್ಲಿ ಆಕಾಂಕ್ಷಿ ಅಭ್ಯರ್ಥಿಗಳ ಸಂಖ್ಯೆ ಕೂಡ ಹೆಚ್ಚಿದೆ. ಆದರೆ ,ನಾವೆಲ್ಲರೂ ಸೇರಿ ಒಗ್ಗಟಾಗಿ ಪಕ್ಷಕ್ಕೆ ದುಡಿದ ಹಾಗೂ ಈ ಚುನಾವಣೆಯಲ್ಲಿ ಗೆಲ್ಲುವ ಸೂಕ್ತ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡುತ್ತೇವೆ ಎಂದರು.
ನಮ್ಮಲ್ಲಿ ಈ ಹಿಂದೆ ನಡೆದ ಕೆಲ ಚುನಾವಣೆಗಳಲ್ಲಿ ನಮ್ಮ ನಮ್ಮಲ್ಲಿನ ಬಣಗಳ ಕಾರಣ ಕೆಲವು ಕಡೆ ಅನಿವಾರ್ಯವಾಗಿ ಸೋತಿರಬಹುದು ಆದರೆ ಚಿಮುಲ್ ಸೇರಿದಂತೆ ಮುಂದೆ ಬರುವ ಯಾವುದೇ ಚುನಾವಣೆಯಲ್ಲೂ ಆ ರೀತಿ ಸೋಲುವಂತಾಗಬಾರದು ಎಂದು ಹೇಳಿದರು.
ಡೇರಿಗಳ ನಾಮ ನಿರ್ದೇಶಿತರ ನೇಮಕ ವಿಚಾರಕ್ಕೆ ಬಂದರೆ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ನಾಮ ನಿರ್ದೇಶಕರನ್ನು ನಮ್ಮ ವಿದಾನಸಭಾ ಕ್ಷೇತ್ರದಲ್ಲಿ ನೇಮಿಸಲಾಗಿದ್ದು ಇದು ನಮಗೆ ಅನೇಕ ಡೇರಿಗಳಲ್ಲಿ ಅಧಿಕಾರ ಹಿಡಿಯಲು ಸಹಾಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷವು ನಮ್ಮೆಲ್ಲರಿಗೂ ತಾಯಿ ಇದ್ದಂತೆ, ನಾವು ಚುನಾವಣೆ ಸಮಯದಲ್ಲಿ ತಾಯಿಗೆ ಮೋಸ ಮಾಡುವ ಕೆಲಸ ಯಾರಿಂದಲೂ ಆಗಬಾರದು ಎಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್ ಗೌಡ ಮಾತನಾಡಿ, ಈ ವಿದಾನಸಭಾ ಕ್ಷೇತ್ರವು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು ಕಾಂಗ್ರೆಸ್‍ನಲ್ಲಿ ಬಣಗಳ ರಾಜಕೀಯ ಇದೆ ಎಂಬುದನ್ನು ಮನಸ್ಸಿ ನಿಂದ ಕಿತ್ತು ಹಾಕಿ ,ನಮ್ಮಲ್ಲಿ ಇದ್ದ ಸಣ್ಣ ಪುಟ್ಟ ಬಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದೇವೆ ಎಲ್ಲವೂ ಸರಿ ಹೋಗಿದೆ ಎಂದರು.
ಕಾಂಗ್ರೆಸ್ ಮುಖಂಡ ಆಂಜಿನಪ್ಪ(ಪುಟ್ಟು) ಮಾತನಾಡಿ, ಇತರೆ ಚುನಾವಣೆಗಳಿಗೆ ಹೋಲಿಸಿದರೆ ಚಿಮುಲ್ ಚುನಾವಣೆಯು ನೇರವಾಗಿ ರೈತರಿಗೆ ಸಂಬಂಧಿಸಿದ ಸಹಕಾರ ಸಂಸ್ಥೆಯ ಚುನಾವಣೆಯಾಗಿದೆ ರೈತರು ಹಾಗು ಕೃಷಿಕರ ಹಿತದ ದೃಷ್ಟಿಯಲ್ಲಿಟ್ಟುಕೊಂಡು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡೋಣ ಎಂದರು.
ಯಾರೇ ಅಂತಿಮ ಅಭ್ಯರ್ಥಿಗಳಾಗಲಿ ಅವರನ್ನು ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಗೆಲ್ಲಿಸಿ ಚಿಮುಲ್‍ಗೆ ಕಳುಹಿಸುವ ಕೆಲಸ ಶತಾಯ ಗತಾಯ ಮಾಡೋಣ ಎಂದು ನುಡಿದರು.
ಈ ವೇಳೆ ಸಭೆಯಲ್ಲಿ ಚಿಮುಲ್ ಚುನಾವಣಾ ಆಕಾಂಕ್ಷಿ ಅಭ್ಯರ್ಥಿಗಳಾದ ಆರ್.ಶ್ರೀನಿವಾಸ್, ಕೆ.ಗುಡಿಯಪ್ಪ,
ರಾಯಪ್ಪನಹಳ್ಳಿ ಅಶ್ವತ್ ನಾರಾಯಣರೆಡ್ಡಿ, ಚಿಕ್ಕತೇಕಹಳ್ಳಿ ಪ್ರದೀಪ್ ಕುಮಾರ್, ಬೆಳ್ಳೂಟಿ ಚೊಕ್ಕೇಗೌಡ ಹಾಗೂ ಭಕ್ತರಹಳ್ಳಿ ಲಕ್ಷ್ಮಿನಾರಾಯಣ ಅವರ ಹೆಸರುಗಳು ಪ್ರಸ್ತಾಪವಾದವು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಸುಬ್ರಮಣಿ,ನಗರಸಭೆ ಮಾಜಿ ಉಪಾಧ್ಯಕ್ಷ ಅಪ್ಸರ್ ಪಾಷ ,ಬ್ಯಾಟರಾಯಶೆಟ್ಟಿ , ನಿರಂಜನ್, ಆನಂದ್, ನಾರಾಯಣಸ್ವಾಮಿ, ಚಿದಾನಂದಮೂರ್ತಿ,ಕಂಪನಿ ದೇವರಾಜ್, ಮುಖಂಡರು ಹಾಗು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಾಕ್ಸ್ :-
– ಹಲವು ಕಾರಣಗಳಿಂದ ಮುನಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಬಣಗಳಾಗಿ ಗುರ್ತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡರಾದ ರಾಜೀವ್ ಗೌಡ ಹಾಗು ಆಂಜಿನಪ್ಪ (ಪುಟ್ಟು) ಅವರನ್ನು ಕಳೆದ
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹೈಕಾಮಾಂಡ್ ಒಟ್ಟಾಗಿಸಿದ್ದರು , ಕೆಲ ತಿಂಗಳುಗಳ ನಂತರ ಪ್ರತಿಷ್ಟೆ ತೆಗೆದುಕೊಂಡು ಬೇರೆಯಾದರು ,ಮತ್ತೆ ಸರ್ಕಾರದ ನಾಮ ನಿರ್ದೇಶಿತರ ನೇಮಕ ವಿಚಾರಕ್ಕೆ ದೂರವಾದರು ,ಮತ್ತೆ ಈಗ ಚಿಮುಲ್ ಚುನಾವಣೆ ಮತ್ತೆ ಒಂದುಗೂಡಿದ್ದಾರೆ ಈ ಒಗ್ಗಟ್ಟು ಪ್ರದರ್ಶನ ಎಷ್ಟು ದಿನ ಮುಂದುವರಿಯಲಿದೆ ಹಾಗು ಪಕ್ಷ , ಚಿಮುಲ್ ಚುನಾವಣೆಯ ಮೇಲೆ ಪರಿಣಾಮ ಯಾವ ರೀತಿ ಬೀರಲಿದೆ ಎಂದು ಎರಡು ಬಣಗಳ ಸಮಾನ ಮನಸ್ಕರು ಹಾಗು ಸಾರ್ವಜನಿಕ ವಲಯದಲ್ಲಿ ಗುಪ್ತ್ ,ಗುಪ್ತ್ ಚರ್ಚೆಯಾಗಿ ಹರಿದಾಡುತ್ತಿದೆ.
