ವಿಶ್ವ ಪ್ರಸಿದ್ಧ ಭೋಗ ನಂದೀಶ್ವರ
ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಐತಿಹಾಸಿಕ ಭೋಗ ನಂದೀಶ್ವರ ದೇವಾಲಯ ಅದ್ಭುತವಾದ ವಾಸ್ತು ಶಿಲ್ಪ, ಇಲ್ಲಿ ನಡೆಯುವ ನಾನಾ ಧಾರ್ಮಿಕ ಕೈಕಂರ್ಯಗಳು ಪ್ರವಾಸಿಗರು, ಭಕ್ತಗಣವನ್ನು ಆಕರ್ಷಿಸುತ್ತಿದೆ.
ವಿಶೇಷವಾಗಿ ನಂದಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಪುರಾತನ ಕಾಲದ ಈ ನಂದಿ ದೇಗುಲಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಭೋಗ ನಂದೀಶ್ವರ, ಅರುಣಾಚಲೇಶ್ವರ, ಈ ಎರಡು ಮಧ್ಯೆದ ಗುಡಿಯಲ್ಲಿ ಉಮಾಮಹೇಶ್ವರ, ಕಮಠೇಶ್ವರ, ಅಪಿತ ಕುಚಲಾಂಬದೇವಿ ಮತ್ತು ಗಿರಿಜಾ ಮಾತೆಯ ದರ್ಶನ ಪಡೆಯುತ್ತಾರೆ.
ಕಿರು ಪರಿಚಯ: ಭೋಗ ನಂದೀಶ್ವರ ದೇವಾಲಯವೂ ಕ್ರಿ.ಶ 9 ರಿಂದ 15 ನೇ ಶತಮಾನದ ಒಂದು ಉತ್ತಮ ದ್ರಾವಿಡ ಶೈಲಿಯ ವಾಸ್ತು ಪ್ರಕಾರವಾಗಿದೆ. ನೊಳಂಬರ ಆಡಳಿತಗಾರ ನೋಳಂಬಂದಿರಾಜ ಮತ್ತು ರಾಷ್ಟ್ರಕೂಟ ದೊರೆ ಮೂರನೇ ಗೋವಿಂದ (ಕ್ರಿ.ಶ 806) ಜಯತೇಜ ಮತ್ತು ದತ್ತಿಯಾ (ಕ್ರಿ.ಶ 810) ನಂದಿಯಲ್ಲಿನ ಶಿವ ದೇವಸ್ಥಾನ ಕಟ್ಟಿಸಲು ಧನ ಸಹಾಯ ಮಾಡಿದ್ದರೆಂದು ಬಾಣ ಆಡಳಿತಗಾರನ, ತಾಮ್ರದ ಫಲಕಗಳಿಂದ ತಿಳಿದು ಬರುತ್ತದೆ.
ನಂದಿಯ ಚೋಳರ ಆಡಳಿತಕ್ಕೆ ಒಳಗಪಟ್ಟಿತ್ತೆಂದು ಶಿಲಾ ಶಾಸನಗಳಿಂದ ಮತ್ತು ತದ ನಂತರ ಹೊಯ್ಸಳ, ವಿಜಯನಗರ ಅರಸರುಗಳ ಆಡಳಿತಕ್ಕೊಳಪಟ್ಟಿತ್ತೆಂದು ತಿಳಿದು ಬಂದಿದೆ. ನಂದಿ ಗ್ರಾಮವು ಕ್ರಿ.ಶ 4 ರಿಂದ 10 ನೇ ಶತಮಾನದಲ್ಲಿ ಬಾಣ-ನೊಳಂಬರ ಪ್ರಾಂತ್ಯದ ಒಂದು ಭಾಗವಾಗಿತ್ತು ಎನ್ನಲಾಗಿದೆ.
ನಂಬಿಕೆಗೆ ಪಾತ್ರ: ಅರುಣಾಚಲೇಶ್ವರ ಮತ್ತು ಭೋಗ ನಂದೀಶ್ವರ ಶಿವನ ಬಾಲ್ಯ ಮತ್ತು ಯೌವನದ ಸಂಕೇತವಾಗಿದೆ. ಈ ದೇವಾಲಯಕ್ಕೆ ಹೊಸದಾಗಿ ಮದುವೆಯಾದ ದಂಪತಿಗಳು ಈ ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಸಹ ಇದೆ.
ಇಲ್ಲಿನ ವಿಶೇಷತೆ: ಈ ದೇವಾಲಯ 112.8 ಮೀ ಉದ್ದ, ಮತ್ತು 76.2 ಮೀ ಅಗಲದ ಪ್ರಕಾರದಲ್ಲಿರುವ ಜೋಡಿ ದೇವಾಲಯಗಳಲ್ಲಿ ಒಂದಾಗಿದೆ. ಉತ್ತರದಲ್ಲಿ ಭೋಗನಂದೀಶ್ವರ ಮತ್ತು ದಕ್ಷಿಣದಲ್ಲಿ ಅರುಣಾಚಲೇಶ್ವರ ದೇವಸ್ಥಾನಗಳಿವೆ. ಎರಡು ದೇವಾಲಯಗಳ ಮಧ್ಯದಲ್ಲಿ ಉಮಾಮಹೇಶ್ವರನಿಗೆ ಅರ್ಪಿಸಲಾಗಿದೆ. ಇದೇ ಪ್ರಕಾರದಲ್ಲಿ ಅಪಿತ ಕುಚಲಾಂಬದೇವಿ ಮತ್ತು ಗಿರಿಜಾ ದೇವಿ ಎರಡು ದೇವಿಯ ದೇವಸ್ಥಾನಗಳಿವೆ. 2 ಮಹಾದ್ವಾರಗಳು, ವಸಂತ ಮಂಟಪ, ತುಲಾ ಭಾರ ಮಂಟಪಗಳಿವೆ. ಇದೇ ಪ್ರಕಾರಕ್ಕೆ ಹೊಂದಿಕೊಂಡತೆ ಒಂದು ಸುಂದರ ಮೆಟ್ಟಿಲುಗಳ ಕಲ್ಯಾಣಿ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ದೇವಾಲಯದ ವಾಸ್ತು ಶಿಲ್ಪ ನೋಡಲು ಬರೀ ರಾಜ್ಯವಲ್ಲದೇ ವಿದೇಶಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ
ಪ್ರತಿ ವರ್ಷ ಕಾರ್ತಿಕ ಮಾಸದ ಪ್ರಯುಕ್ತ ಕಡೆ ಸೋಮವಾರ ದಿನದಂದು ಭೋಗ ನಂದೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕೈಕಂರ್ಯಗಳು ಜರುಗುತ್ತದೆ. ದೇವಾಲಯದ ಲಕ್ಷ್ಮ ದೀಪೋತ್ಸವ ಸಮಿತಿ ವತಿಯಿಂದ ಲಕ್ಷ್ಮ ದೀಪೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ದೇಗುಲದ ಆವರಣ ಭಕ್ತರು ಹೊತ್ತಿಸುವ ಹಣತೆಗಳ ಸಮೂಹ ಇಡೀ ದೇವಾಲಯಕ್ಕೆ ಹೊಸ ಮೆರಗನ್ನು ತುಂಬಲಿದೆ.
ಅದ್ಧೂರಿ ನಂದಿ ಜಾತ್ರೆ ವಿಶೇಷ
ಮಹಾಶಿವರಾತ್ರಿ ಪ್ರಯುಕ್ತ ಪ್ರಯುಕ್ತ ನಂದಿ ಗ್ರಾಮದಲ್ಲಿರುವ ಭೋಗ ನಂದೀಶ್ವರ ಸ್ವಾಮಿ ದೇವಾಸ್ಥಾನದಲ್ಲಿ ಅದ್ಧೂರಿಯಾಗಿ ನಂದಿ ಜಾತ್ರೆಯನ್ನು ಪ್ರತಿ ವರ್ಷ ನಡೆಯಲಿದೆ. ಈ ವೇಳೆ ನಡೆಯುವ ಜೋಡಿ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ರಥಗಳ ಮೇಲೆ ಬಾಳೆ ಹಣ್ಣು ತೂರಿ ಧನ್ಯತಾ ಭಾವ ಮೆರೆಯುತ್ತಾರೆ.
