
ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ತಾಲೂಕಿನ ಕಳವಾರ ಗ್ರಾಮದಲ್ಲಿ ಎರಡು ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಮೀನಿನಲ್ಲಿ ರಾತ್ರೋ ರಾತ್ರಿ ಎಗ್ಗಿಲ್ಲದೇ ಮಣ್ಣು ದಂಧೆ ನಡೆಯುತ್ತಿದೆ. ಜೆಸಿಬಿ ಯಂತ್ರಗಳ ನೆರವಿನಿಂದ ನೂರಾರು ಟಿಪ್ಪರ್ ಲೋಡ್ ಮಣ್ಣು ಖಾಸಗಿ ವ್ಯಕ್ತಿಗಳು ಸಾಗಿಸುತ್ತಿದ್ದರೂ ಟ್ರಸ್ಟ್ ಪದಾಧಿಕಾರಿಗಳು, ಭಕ್ತರಿಂದ ತಡೆಯಲು ಸಾಧ್ಯವಾಗುತ್ತಿಲ್ಲ. ಮಠಕ್ಕೆ ಸೇರಿದ ಜಮೀನಿನಲ್ಲಿ ಮಣ್ಣು ಬಗೆದ ಪರಿಣಾಮ ಹಳ್ಳಕೊಳ್ಳಗಳು ನಿರ್ಮಾಣವಾಗಿದೆ. ಮಠದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲ ವ್ಯಕ್ತಿಗಳು ಈ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಜದಾನಿಗೆ ಸಮೀಪವಿರುವ ಟ್ರಕ್ಕಿಂಗ್ ಸ್ಫಾಟ್ ಎಂದೇ ಖ್ಯಾತಿಗಳಿಸಿರುವ ಸ್ಕಂದಗಿರಿ ಬೆಟ್ಟದ ಬುಡದಲ್ಲಿ ಕಾಲಜ್ಞಾನಿ ಶ್ರೀವೀರಬ್ರಹ್ಮೇಂದ್ರ ಸ್ವಾಮಿ ಅವರು ಬಾಲ್ಯದ ಜೀವನ ಕಳೆದ ಸ್ಥಳ ಪಾಪಾಘ್ನಿ ಮಠ ಹಾಗೂ ಒಂಕಾರ ಜ್ಯೋತಿ ಮಠ ಟ್ರಸ್ಟ್ ಇದ್ದು. ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇದೇ ಪಾಪಾಘ್ನಿ ಮಠ ಹಾಗೂ ಒಂಕಾರ ಮಠ ಟ್ರಸ್ಟ್ಗೆ ಸೇರಿದ ಸುಮಾರು ಎರಡು ಎಕರೆ ಜಮೀನಿನಲ್ಲಿ ಇದಕ್ಕಿದ್ದಂತೆ ಮರಳು ದಂಧೆ ಪ್ರಾರಂಭವಾಗಿದೆ. ಎರಡು ದಿನಗಳಲ್ಲಿ ನೂರಾರು ಲೋಡ್‌ಗಳಷ್ಟು ಮಣ್ಣನ್ನು ಜೆಸಿಬಿ ಯಂತ್ರಗಳ ಮೂಲಕ ಟಿಪ್ಪರ್‌ಗಳಲ್ಲಿ ಸಾಗಿಸಿದ್ದಾರೆ. ಇದನ್ನು ತಡವಾಗಿ ಗಮನಿಸಿದ ಪಾಪಾಘ್ನಿ ಮಠದ ಟ್ರಸ್ಟಿಗಳು ಹೌಹಾರಿದ್ದಾರೆ. ಅಲ್ಲದೆ ಅಕ್ರಮವಾಗಿ ಮಣ್ಣು ಸಾಗಿಸುವವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಪಾಘ್ನಿ ಮಠದ ಟ್ರಸ್ಟ್ ಅಧ್ಯಕ್ಷ ಹೆಂಜರಾಚಾರಿ ಹೇಳಿಕೆ ನೀಡಿದ್ದಾರೆ.
ಇನ್ನೂ ಒಂಕಾರ ಜ್ಯೋತಿ ಟ್ರಸ್ಟ್ ಜಾಗದಲ್ಲಿ ಮಣ್ಣಿನ ಲೂಟಿ ನಡೆದಿದ್ದು, ಇಲ್ಲಿ ಕೆಲಸ ಮಾಡುವವರನ್ನು ಯಾರು ಸಹ ಇದನ್ನು ವಿರೋಧಿಸಿಲ್ಲ. ಬದಲಿಗೆ ನಾವೇ ಭೂಮಿ ಮಟ್ಟ ಮಾಡಲು ಮಣ್ಣು ತೆಗೆಸಿದ್ದೇವೆ ಎಂದು ಇಲ್ಲಿ ಕೆಲಸ ಮಾಡುವ ಮರಿಯಪ್ಪ ಸ್ವಾಮೀಜ ಸಾಕು ಮಗ ಗುರುನಾಥ್ ಎಂಬುವರು ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ, ಇದೇ ಟ್ರಸ್ಟ್ನ ಸದಸ್ಯರು ಮಣ್ಣು ತೆಗೆದಿರುವುದಕ್ಕೆ ಪ್ರಬಲವಾಗಿ ವಿರೋಧಿಸಿದ್ದಾರೆ.
ಒಟ್ಟಿನಲ್ಲಿ ಒಂಕಾರೇಶ್ವರ ಮಠ ಮತ್ತು ಪಾಪಾಘ್ನಿ ಮಠ ಎರಡು ಮಠಗಳು ಪ್ರಕೃತಿಯ ಮಡಿಲಿನಲ್ಲಿ ಇದ್ದು, ಸ್ಕಂದಗಿರಿ ಮತ್ತು ಕೂರ್ಮಗಿರಿ ರಮಣೀಯ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ಇದರ ಸಮೀಪವಿರುವ ಉಳಿದ ಜಾಗದಲ್ಲಿ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ್ದು, ಈ ಪ್ರದೇಶದಲ್ಲಿ ಅಪರೂಪ ಸಸ್ಯ ಪ್ರಬೇಧಗಳಿದ್ದು, ಇಲ್ಲಿ ಮಣ್ಣು ತೆಗೆಯುವುದರಿಂದ ಒಂದು ಕಡೆ ಪರಿಸರಕ್ಕೆ ಹಾನಿ, ಮತ್ತೊಂದು ಕಡೆ ಉಭಯ ಮಠಗಳಿಗೆ ಹಾನಿಯಾಗುವುದನ್ನು ತಪ್ಪಿಸಬೇಕಾಗಿದ್ದು, ಇಲ್ಲಿ ಮಣ್ಣು ಸಾಗಿಸಿದ ವ್ಯಕ್ತಿಗಳು ಅವರಿಗೆ ಒಳಗೊಳಗೆ ಬೆಂಬಲ ನೀಡಿದ ವ್ಯಕ್ತಿಗಳ ವಿರುದ್ದ ಸಂಬAಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
