ಶಿಡ್ಲಘಟ್ಟ : ಪ್ರತಿ ವರ್ಷ ಶುಕ್ಲ ಪಕ್ಷದ ಪೌರ್ಣಮಿಯಂದು ನಡೆಯುವ ಬ್ರಹ್ಮ ರಥೋತ್ಸವದ ಅಂಗವಾಗಿ ನಲ್ಲರಾಳ್ಳಹಳ್ಳಿ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ 1 ವಾರದ ಕಾಲ ವಿಶೇಷ ಪೂಜೆಗಳು ನೆರವೇರಲಿವೆ ಎಂದು ತಹಶಿಲ್ದಾರ್ ಎನ್.ಗಗನಸಿಂಧು ತಿಳಿಸಿದರು.
ನಗರದ ತಾಲ್ಲೂಕು ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯ ರಾಮಲಿಂಗೇಶ್ವರ ಬೆಟ್ಟದ ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಜ.3ರಂದು ನಡೆಯಲಿದೆ. ಜನವರಿ.2 ರಂದು ಅಂಕುರಾರ್ಪಣೆ, ಧ್ವಜಾರೋಹಣದೊಂದಿಗೆ ಶುರುವಾಗಿ ಪಲ್ಲಕ್ಕಿ ಉತ್ಸವ, ವಸ್ತಾಲಂಕಾರ, ವಿಭೂತಿ ಕುಂಕುಮಾರ್ಚನೆ, ಕಾಶಿಯಾತ್ರೆ ಉತ್ಸವ, ನಂದಿವಾಹನೋತ್ಸವ, ಗಿರಿಜಾ ಕಲ್ಯಾಣೋತ್ಸವ, 3.ರಂದು ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಜ.3ರಂದು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್, ಶಾಸಕ ಬಿ.ಎನ್. ರವಿಕುಮಾರ್, ಸಂಸದ ಮಲ್ಲೇಶ್‌ಬಾಬು ಮತ್ತಿತರ ಗಣ್ಯರು ಭಾಗವಹಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜ.4 ರಿಂದ 7ರವರೆಗೂ ಪ್ರತಿನಿತ್ಯ ದೇವರಿಗೆ ವಿಶೇಷ ಪೂಜೆಗಳು ನಡೆಯಲಿದ್ದು ತಾಲ್ಲೂಕು ಆಡಳಿತದ ಜತೆಗೆ ದೇವಾಲಯದ ಕನ್‌ವೀನರ್ ಎಂ.ಸುನಿತಾ ಶ್ರೀನಿವಾಸರೆಡ್ಡಿ, ಸಮಿತಿಯ ಎಲ್ಲಾ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡು ರಥೋತ್ಸವ ಅದ್ದೂರಿಯಾಗಿ ನಡೆಸುತ್ತಾರೆ. ರಾಮ ಹಾಗು ಈಶ್ವರ ಒಂದೆಡೆ ನೆಲೆಸಿರುವ ದೇಗುಲಗಳಿರುವುದು ಬಲು ಅಪರೂಪ ,ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆಂದು ಪ್ರಸಿದ್ದಿ ಪಡೆದಿದೆ.
ತಾಲ್ಲೂಕಿನ ನಲ್ಲರಾಳ್ಳಹಳ್ಳಿ ಬಳಿಯ ರಾಮಲಿಂಗೇಶ್ವರ ಬೆಟ್ಟ ಪುರಾತನ ಕ್ಷೇತ್ರವಾಗಿದೆ ,ಬೆಟ್ಟದ ಮೇಲೆ ದೇವಾಲಯವಿದ್ದು, ಇಲ್ಲಿನ ಪರಿಸರ ಹಲವು ವಿಶೇಷತೆಗಳಿಂದ ಕೂಡಿದೆ ಪ್ರತಿ ವರ್ಷ ಶುಕ್ಲ ಪಕ್ಷದ ಪೌರ್ಣಮಿಯಂದು ನಡೆಯುವ ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.
ಹಾಗೆಯೇ ಜ.3ರಂದು ಬ್ರಹ್ಮರಥೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಈ ನಿಮಿತ್ತ 2ರಂದು ಅಂಕುರಾರ್ಪಣೆ, ಧ್ವಜಾರೋಹಣದೊಂದಿಗೆ ಶುರುವಾಗಿ ಉತ್ಸವ, ಪಲ್ಲಕ್ಕಿ ವಸ್ತ್ರಾಲಂಕಾರ, ವಿಭೂತಿ ಕುಂಕುಮಾರ್ಚನೆ, ಕಾಶಿಯಾತ್ರೆ ಉತ್ಸವ, ನಂದಿವಾಹನೋತ್ಸವ, ಗಿರಿಜಾಕಲ್ಯಾಣೋತ್ಸವ ನಡೆಯಲಿವೆ.ಎಂದರು.
ದೇವಾಲಯದ ಹಿನ್ನೆಲೆ : ರಾಮಾಯಣದ ಹಿನ್ನೆಲೆಯ ಜೋಳರ ಕಾಲದ ಕೆತ್ತನೆಯುಳ್ಳ ದೇಗುಲ ಇದಾಗಿದೆ,ಸಾಕಷ್ಟು ದೂರ ಕಾಣಬಲ್ಲ ಅತಿ ಎತ್ತರದ ಧ್ವಜಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ್ಯವಾಗಿದೆ,ಬೇರೆಲ್ಲಿಯೂ ಕಾಣಸಿಗದ ಹನುಮಲಿಂಗ ದೇವಾಲಯ ಕೂಡ ಇಲ್ಲಿದೆ ರಾಮ, ಲಕ್ಷ್ಮಣ ಮತ್ತು ಸೀತಾ ದೊಣೆಗಳೆಂಬ ಕೊಳಗಳಿದ್ದು, ಇವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿ ಇದೆ.
