ಶಿಡ್ಲಘಟ್ಟ : ಹೆಲ್ಮೆಟ್ ಧರಿಸುವುದು ಕೇವಲ ಕಾನೂನಿನ ಕಾರಣಕ್ಕಲ್ಲ ,ನಿಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಲು, ಅಪಘಾತದಲ್ಲಿ ಕೈಕಾಲಿಗೆ ಚಿಕಿತ್ಸೆ ಸಾಧ್ಯವಾದರೂ ತಲೆಗೆ ಗಾಯವಾದರೆ ಜೀವ ಉಳಿಯುವುದು ಕಷ್ಟ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಷಾ ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ –ಜನವರಿ 2026ರ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ, 112 ಘಟಕ, ಚಿಂತಾಮಣಿ ಉಪವಿಭಾಗ, ಶಿಡ್ಲಘಟ್ಟ ವೃತ್ತ ಹಾಗೂ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಸಹಯೋಗದಲ್ಲಿ ನಗರದ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ದ್ವಿಚಕ್ರ ವಾಹನಗಳಿವೆ ಆದರೆ ವಾಹನ ಚಾಲನೆಗೂ ಮುನ್ನ ಚಾಲನಾ ಪರವಾನಗಿ ಹಾಗೂ ಸುರಕ್ಷತಾ ಕ್ರಮಗಳು ಅತ್ಯಂತ ಅಗತ್ಯ ಎಂದು ಹೇಳಿದರು.
ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ ದಂಡ ಹಾಗೂ ಕಠಿಣ ಕಾನೂನು ಕ್ರಮ ಎದುರಾಗಲಿದೆ ಎಂದು ಎಚ್ಚರಿಸಿದ ಅವರು,ಮೊದಲ ಬಾರಿ ದಂಡ, ಎರಡನೇ ಬಾರಿ ಡಬಲ್ ದಂಡ, ಮೂರನೇ ಬಾರಿ ಇನ್ನಷ್ಟು ಕಠಿಣ ಶಿಕ್ಷೆ ಅನಿವಾರ್ಯ. ಸಾವಿರ ರೂಪಾಯಿ ಹೆಲ್ಮೆಟ್ ನಿಮ್ಮ ಲಕ್ಷಾಂತರ ಮೌಲ್ಯದ ಜೀವನವನ್ನು ಉಳಿಸಬಲ್ಲದು ಪೊಲೀಸರೊಂದಿಗೆ ವಾಗ್ವಾದಕ್ಕೆ ಹೋಗದೆ ಕಾನೂನಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
18 ವರ್ಷ ತುಂಬದ ಮಕ್ಕಳಿಗೆ ವಾಹನ ನೀಡುವುದು ದೊಡ್ಡ ತಪ್ಪು ಅಪಘಾತವಾದರೆ ವಾಹನ ಮಾಲೀಕರ ಮೇಲೂ ಪ್ರಕರಣ ದಾಖಲಾಗುತ್ತದೆ. ಲಕ್ಷಾಂತರ ರೂಪಾಯಿ ಪರಿಹಾರ ಕಟ್ಟಬೇಕಾದ ಪರಿಸ್ಥಿತಿ ಉಂಟಾಗಬಹುದು ಎಂದರು.
ವೃತ್ತ ನಿರೀಕ್ಷಕ ಆನಂದ್ ಕುಮಾರ್ ಮಾತನಾಡಿ, ಸಂಚಾರಿ ನಿಯಮಗಳು ದಂಡಕ್ಕಾಗಿ ಅಲ್ಲ, ಜೀವ ರಕ್ಷಣೆಗಾಗಿ ಇತ್ತೀಚಿನ ಅಪಘಾತಗಳಲ್ಲಿ ಬಹುತೇಕ ವಾಹನಗಳಿಗೆ ಇನ್ಸೂರೆನ್ಸ್ ಇರಲಿಲ್ಲ ಇನ್ಸೂರೆನ್ಸ್ ಇಲ್ಲದಿದ್ದರೆ 15–20 ಲಕ್ಷ ರೂಪಾಯಿ ಪರಿಹಾರವನ್ನು ಮಾಲೀಕರೇ ಭರಿಸಬೇಕಾಗುತ್ತದೆ ಎಂದರು.
ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿಕ್ಕಬಳ್ಳಾಪುರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ರಸ್ತೆ ಸಾರಿಗೆ ಇಲಾಖೆಯ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ ಎಸ್., ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ನಗರ ಪೊಲೀಸ್ ಠಾಣೆ ಉಪನಿರೀಕ್ಷಕ ವೇಣುಗೋಪಾಲ್, ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಸತೀಶ್,ಪೊಲೀಸ್ ಅಧಿಕಾರಿಗಳು, ವಕೀಲರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
