ಶಿಡ್ಲಘಟ್ಟ : ಪೊಲೀಸರು ದಂಡ ಹಾಕಿ ಕೇಸು ಹಾಕುತ್ತಾರೆ ಎಂದು ಭಯಪಟ್ಟು ಹೆಲ್ಮೆಟ್ ಧರಿಸುವ ಬದಲು ನಮ್ಮ ಪ್ರಾಣ ರಕ್ಷಣೆಗೆ ಹೆಲ್ಮೆಟ್ ಧರಿಸಬೇಕು ಹಾಗು ನಿಮ್ಮಅವಲಂಬಿತರ ಹಿತ ದೃಷ್ಟಿಯಿಂದ ಹೆಲ್ಮೆಟ್ ಧರಿಸಬೇಕು ಎಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್.ಐ ಶ್ಯಾಮಲಾ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಹೆಲ್ಮೆಟ್ ಬಳಕೆ ಕುರಿತು ಜನ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
18 ವರ್ಷಕ್ಕೆ ಮೇಲ್ಪಟ್ಟ ಬೈಕ್ ಚಲಾಯಿಸುವ ಎಲ್ಲರೂ ನಿಯಮದಂತೆ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಬೇಕು, ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಪಾಲಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಬೈಕ್ ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವುದು ಸರ್ವೆ ಸಾಮಾನ್ಯವಾಗಿದೆ ,ಇದು ನಮಗೆ ನಾವೇ ಪ್ರಾಣಕ್ಕೆ ಸಂಚಕಾರ ತಂದುಕೊಂಡಂತೆ ಎಂದು ಆತಂಕ ವ್ಯಕ್ತಪಡಿಸಿದರು.
ಮದ್ಯಪಾನ ಮಾಡಿ ಬೈಕ್ ಓಡಿಸುವುದು, ನಿಯಮ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುದು ಮಾಡದೆ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿ ತಾವು ಮತ್ತು ತಮ್ಮನ್ನು ನಂಬಿದವರ ಜೀವ ಕಾಪಾಡಿಕೊಳ್ಳಿ ಎಂದು ಕೋರಿದರು.
ಇದೇ ವೇಳೆ ದಿಬ್ಬೂರಹಳ್ಳಿ ವೃತ್ತದಲ್ಲಿ ಪೊಲೀಸರು ಮತ್ತು ಪತ್ರಕರ್ತರು ಹೆಲ್ಮೆಟ್ ಧರಿಸಿ ಜಾಥಾ ನಡೆಸುವ ಮೂಲಕ ಹೆಲ್ಮೆಟ್ ಬಳಕೆ ಕುರಿತು ಜನ ಜಾಗೃತಿ ಮೂಡಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಎ.ಶಶಿಕುಮಾರ್ ಹಾಗು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
