ಚಿಕ್ಕಬಳ್ಳಾಪುರ : ಇಂದಿರಾ ಕಿಟ್ ಸೌಲಭ್ಯ ಮುಂದಿನ ಯುಗಾದಿ ಹಬ್ಬದ ವೇಳೆಗೆ ಜನರಿಗೆ ಸಿಗಲಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ “ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ”ಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಬ್ಬ ವ್ಯಕ್ತಿಗೆ 10 ಕೆ.ಜಿ. ಅಕ್ಕಿಯನ್ನು ಕೊಟ್ಟರೆ ಒಂದು ಕುಟುಂಬಕ್ಕೆ 30 ರಿಂದ 40 ಕೆ.ಜಿ. ಅಕ್ಕಿ ಮಾಸಿಕ ಸಿಗುವುದರಿಂದ ಅಷ್ಟು ಪ್ರಮಾಣದ ಅಕ್ಕಿಯನ್ನು ಜನರು ಸದುಪಯೋಗಪಡಿಸಿಕೊಳ್ಳುತ್ತಿಲ್ಲ, ಈ ಬಗ್ಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಗಮನಕ್ಕೆ ನಾನು ತಂದಿದ್ದೆ ಇದನ್ನು ಪರಿಗಣಿಸಿದ ಸಮಿತಿಯು ಈ ಮಾಹೆಯಿಂದ ಇಂದಿರಾ ಕಿಟ್ ಸೌಲಭ್ಯ ಜನರಿಗೆ ನೀಡಲು ನಿರ್ಧಾರ ಮಾಡಲಾಗಿತ್ತು ,ಆದರೆ ಅನಿವಾರ್ಯ ಕಾರಣಗಳಿಂದ ಬರುವ ಯುಗಾದಿಯಿಂದ ಇಂದಿರಾ ಕಿಟ್ ನ್ನು ಸಾರ್ವಜನಿಕರಿಗೆ ವಿತರಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಸಮಿತಿಯು ನಿರ್ಧರಿಸಿದೆ ಅದರಂತೆ ಯುಗಾದಿಗೆ ಈ ಸೌಲಭ್ಯ ಸಿಗಲಿದೆ ಎಂದು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳು ಶೇ. 100 ರಷ್ಟು ಪ್ರಗತಿಯನ್ನು ಸಾಧಿಸಬೇಕು. ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಉತ್ತಮ ಪ್ರಗತಿ ಸಾಧಿಸಿದ್ದಾರೆ. ಕೆಲವು ಯೋಜನೆಗಳಲ್ಲಿ ಪ್ರಗತಿ ಸಾಧಿಸಿದ್ದರೂ ಸಹ ಜನರಿಗೆ ಅದರ ಅರಿವಿಗೆ ಬಾರದಿರುವುದು. ವಿಷಾದನೀಯ. ಇದಕ್ಕೆ ಉತ್ತಮ ನಿದರ್ಶನವೆಂದರೆ ಗೃಹಲಕ್ಷ್ಮಿ ಯೋಜನೆಯ ಆರಂಭದಿಂದ ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದೆ. ಆದರೆ ಸದರಿ ಬ್ಯಾಂಕಿನಲ್ಲಿ ಆ ಫಲಾನುಭವಿಗಳು ಸಾಲ ಪಡೆದಿರುವುದರಿಂದ ಸದರಿ ಸಾಲಕ್ಕೆ ಹಣವು ಜಮೆ ಆಗಿದೆ. ಇದು ಅವರ ಅರಿವಿಗೆ ಬಾರದೆ ಹಣ ಬಂದಿಲ್ಲ ಎಂದು ಅಪಪ್ರಚಾರ ಮಾಡಿರುವುದು ಕಂಡುಬಂದಿದೆ. ಅಂತಹ ಇನ್ನಿತರ ಪ್ರಕರಣಗಳನ್ನು ಗುರ್ತಿಸಿ ಫಲಾನುಭವಿಗಳಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ವರೆಗೆ ಜಿಲ್ಲೆಯ ಯಾವುದೇ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ಯೋಜನೆಗಳನ್ನು ಪಡೆದುಕೊಳ್ಳುವಂತೆ ಗ್ಯಾರಂಟಿ ಯೋಜನೆ ಜಾರಿಯ ಅಧ್ಯಕ್ಷರು ಈ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ವೈ.ನವೀನ್ ಭಟ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ರಾಮಕೃಷ್ಣಪ್ಪ, ಸದಸ್ಯರಾದ ಮಧುಸೂದನ್ ರೆಡ್ಡಿ, ಮುನಿನಾರಾಯಣಪ್ಪ, ಚೆಲ್ಲಂ, ಎಂ.ಕೆ ವೇಣುಗೋಪಾಲ್, ಹೆಚ್.ಎಂ. ಮುನಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
