ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷದ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಹೇಗೆ ತಲುಪಿಸಬೇಕು, ಡಿಜಿಟಲ್ ಸದಸ್ಯತ್ವ ಅಭಿಯಾನದ ಮಹತ್ವ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷ ನೇರವಾಗಿ ಜನಸಾಮಾನ್ಯರನ್ನು ಸಂಪರ್ಕಿಸುವ ಮಾರ್ಗಗಳ ಕುರಿತು ವಿವರವಾಗಿ ಚರ್ಚಿಸಲಾಗಿದೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಎಚ್.ಎಸ್.ಚಂದನ್ ತಿಳಿಸಿದರು.
ನಗರದ ಸಿದ್ದೇಶ್ವರ ಸಮುದಾಯ ಭವನದಲ್ಲಿ ನಡೆದ ಜೆ ಡಿ ಎಸ್ ಯುವ ಘಟಕದ ಸಮಾವೇಶದಲ್ಲಿ ಹಾಗೂ ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಇಂದಿನಿಂದಲೇ ಸಂಘಟನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು,ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಪ್ರಚಾರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನುವ ಸಂಘಟಿಸಲಾಗುತ್ತಿದೆ.
ರಾಜ್ಯದಲ್ಲಿ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪಕ್ಷದ ಯುವ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಮುಂಬರುವ ಸ್ಥಳೀಯ ಚುನಾವಣೆಗಲ್ಲಿ ಪಕ್ಷವನ್ನ ಗೆಲ್ಲಿಸಲು ಪಕ್ಷದ ಸಾಧನೆಗಳು, ವಿಶೇಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಜನಪರ ಯೋಜನೆಗಳ ಕುರಿತು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಜೆಡಿಎಸ್ ಮುಂದಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ನಿಖಿಲ್ ಕುಮಾರಸ್ವಾಮಿ ಅವರು ಜನರೊಂದಿಗೆ ಜನತಾದಳ ಕಾರ್ಯಕ್ರಮದಡಿ ಈಗಾಗಲೇ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿದ್ದು,ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಮುಕ್ತಮುನಿಯಪ್ಪ ಮಾತನಾಡಿ,ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷವು ಪ್ರತಿಯೊಬ್ಬ ನಾಗರಿಕನಿಗೂ ತಲುಪಬೇಕಿದೆ ಈ ದಿಕ್ಕಿನಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ಅವರು ನೀಡಿರುವ ಮಾರ್ಗದರ್ಶನ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವ ಜೊತೆಗೆ ಬೂತ್ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಮುಂದಿನ ದಿನಗಳಲ್ಲಿ ಸಭೆಗಳನ್ನು ನಡೆಸಿ ಸ್ಪಷ್ಟ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರೋಷನ್ ಅಬ್ಬಾಸ್,ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಕೆ ಆರ್ ರೆಡ್ಡಿ, ತಾಲ್ಲೂಕು ಅಧ್ಯಕ್ಷ ಮುನಿರಾಜು,ಗೌರಿಬಿದನೂರು ನರಸಿಂಹಮೂರ್ತಿ,ಬಂಡ್ಲು ಶ್ರೀನಿವಾಸ್,ಸೂಣ್ಣೆ ಗೌಡ,ಶಾಂತಮೂರ್ತಿ,ಪ್ರಭಾ ನಾರಾಯಣಗೌಡ,ಸ್ಟುಡಿಯೋ ಮಂಜು,ಅಖಿಲ್ ರೆಡ್ಡಿ, ಸಾಧಿಕ್ ಪಾಷ,ಜ಼ಫರುಲ್ಲಾ,ಸೈಯದ್ ಅನ್ವರ್ ಪಾಷ ಇತರರು ಉಪಸ್ಥಿತರಿದ್ದರು.
